ಕೃಷ್ಣಮೃಗ

ಬೋವಿಡೇ ಕುಟುಂಬದ ಉಪವಿಭಾಗ ಆಂಟಿಲೋಪ್‍ನ ಸದಸ್ಯ. ವೈಜ್ಞಾನಿಕ ಹೆಸರು ಆಂಟಿಲೋಪೆ ಸೆರ್ವಿಕಾಪ್ರ. ಹಿಂದೆ ಸೂರತ್‍ನ ಕೆಲವು ಭಾಗಗಳನ್ನು ಬಿಟ್ಟು ಭಾರತದ ಎಲ್ಲ ಮೈದಾನ ಪ್ರದೇಶಗಳಲ್ಲಿ ಕಂಡುಬರುತ್ತಿದ್ದ ಇವು ಇಂದು ಆವಾಸ ನಾಶದಿಂದಾಗಿ ವಂಶನಾಶದ ಹಾದಿ ಹಿಡಿದಿದೆ.

ಮರಿಯಾಗಿದ್ದಾಗ ಹಳದಿ ಬಣ್ಣ ಹೊಂದಿರುವ ಇವು ಕ್ರಮೇಣ ಕಂದು-ಕಪ್ಪಿಗೆ ತಿರುಗುತ್ತವೆ.  ವಯಸ್ಸಿನೊಂದಿಗೆ ಈ ಬಣ್ಣ ಗಾಢವಾಗುತ್ತದೆ.  ಹೆಣ್ಣಿನ ಬಣ್ಣ ಬದಲಾಗದೆ ಹಳದಿಯಾಗೇ ಉಳಿಯುತ್ತದೆ.  ಎರಡಕ್ಕೂ ಕಣ್ಣಿನ ಸುತ್ತ ಬಿಳಿ ಉಂಗುರವಿದ್ದು, ಗಂಡಿಗೆ ಸುರುಳಿಯಾದ ಎರಡು ಕೊಬುಗಳಿರುತ್ತದೆ.  ವಿಜಯದ ಧ್ವಜದಂತೆ ಇವು ಕಂಗೊಳಿಸುತ್ತವೆ.  
ದಕ್ಷಿಣ ಭಾರತದಲ್ಲಿ 20-30ರ ಗುಂಪುಗಳಲ್ಲಿರುವ ಇವು ವರ್ಷಪೂರ್ತಿ ವಂಶಾಭಿವೃದ್ಧಿ ನಡೆಸುತ್ತವೆಯಾದರೂ ಮುಖ್ಯ ವಂಶಾಭಿವೃದ್ಧಿಯ ಸಮಯ ಫೆಬ್ರವರಿ ಮತ್ತು ಮಾರ್ಚ್. ಹೆಣ್ಣಿಗಾಗಿ ಕಾದಾಟ ಸಾಮಾನ್ಯ.  ಹೆಣ್ಣು ಒಂದು ಅಥವಾ ಎರಡು ಮರಿಯನ್ನು ಈಯುತ್ತದೆ.  ಗುಂಪಿನ ನಾಯಕತ್ವ ವಹಿಸುವುದು ಇತರ ಹಲವಾರು ಪ್ರಾಣಿಗಳಲ್ಲಿರುವಂತೆ ಹಿರಿಯ ಹೆಣ್ಣು ಪ್ರಾಣಿ. ಅಪಾಯ ಒದಗಿದಾಗ ಇವು ದಾಪುಗಾಲು ಹಾಕಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸುತ್ತವೆ. ಓ ಓಟದ ಮಧ್ಯದಲ್ಲಿ ದೊಡ್ಡ ದೊಡ್ಡ ಜಿಗಿತಗಳು ಇರುತ್ತವೆ.

(ಕೆ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ